ಹವಾ ಮೆಂಟೇನ್ ಮಾಡಲು ಮಚ್ಚು ಬೀಸಿದ ಗ್ಯಾಂಗ್ ಅರೆಸ್ಟ್..! ಗಣೇಶ ಹಬ್ಬದ ವೇಳೆ 4 ಮಂದಿಗೆ ಹಲ್ಲೆ – 11 ಮಂದಿ ಬಂಧನ..!

 

ಗಣೇಶ ಹಬ್ಬದ ವೇಳೆ ಹವಾ ಮೆಂಟೇನ್ ಮಾಡಲು ಮಚ್ಚು ಬೀಸಿದ ಗ್ಯಾಂಗ್ ಅರೆಸ್ಟ್..!



ಬೆಂಗಳೂರು: ಏರಿಯಾದಲ್ಲಿ ಹವಾ ಮೆಂಟೇನ್ ಮಾಡಲು ಗ್ಯಾಂಗ್ ಕಟ್ಟಿಕೊಂಡು ಸಿಕ್ಕ ಸಿಕ್ಕವರ ಮೇಲೆ ಲಾಂಗು, ಮಚ್ಚು, ಚಾಕು ಹಾಗೂ ಡ್ರ್ಯಾಗರ್‌ನಿಂದ ದಾಳಿ ಮಾಡುತ್ತಿದ್ದ ಆರೋಪಿಗಳ ಗ್ಯಾಂಗ್‌ನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಗಣೇಶ ಹಬ್ಬದ ಸಮಯದಲ್ಲಿ ಎದುರಾಳಿ ಗ್ಯಾಂಗ್‌ನ ಸ್ಯಾಂಡಿ ಎಂಬಾತನನ್ನು ಹುಡುಕಿಕೊಂಡು ಹೋಗಿದ್ದ ಆರೋಪಿಗಳು, ಸ್ಯಾಂಡಿ ಬಗ್ಗೆ ಮಾಹಿತಿ ನೀಡದ ನಾಲ್ವರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ತಿಂಗಳ 20ರಂದು ಉತ್ತರಹಳ್ಳಿ ಆರ್ಚ್ ಬಳಿಯ ಖಾಲಿ ಸೈಟ್‌ಗೆ ಸ್ಯಾಂಡಿಯನ್ನು ಹುಡುಕಿಕೊಂಡು ಆರೋಪಿಗಳ ಗ್ಯಾಂಗ್ ತೆರಳಿತ್ತು. ಈ ವೇಳೆ ಅಲ್ಲಿದ್ದ ಇಬ್ಬರನ್ನು ಸ್ಯಾಂಡಿ ಎಲ್ಲಿದ್ದಾನೆ ಎಂದು ವಿಚಾರಿಸಿದ್ದಾರೆ. ಸ್ಯಾಂಡಿ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಕ್ಕೆ ಇಬ್ಬರ ಮೇಲೂ ಡ್ರ್ಯಾಗರ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಸ್ಥಳಕ್ಕೆ ತೆರಳಿದ ಆರೋಪಿಗಳು, ಕಿರಣ್ ಎಂಬಾತನ ಮೇಲೂ ಆರೇಳು ಜನರ ಗುಂಪಿನಲ್ಲಿ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಮೀನಿನ ಅಂಗಡಿ ಬಳಿ ಫಿಶ್ ತಿನ್ನಲು ಕುಳಿತಿದ್ದ ರವಿಚಂದ್ರನ್ ಎಂಬಾತನ ಮೇಲೂ ದಾಳಿ ನಡೆಸಲಾಗಿದೆ. ಮಣಿ, ಮನು ಹಾಗೂ ಕುಳ್ಳು ಎಂಬುವರು ರವಿಚಂದ್ರನ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹೀಗೆ ಹಂತ ಹಂತವಾಗಿ ಎರಡು ತಂಡಗಳಾಗಿ ದಾಳಿ ನಡೆಸಿ ಒಟ್ಟು ನಾಲ್ವರ ಮೇಲೆ ಹಲ್ಲೆ ಮಾಡಿರುವ ಆರೋಪ ಗ್ಯಾಂಗ್ ಮೇಲಿದೆ.

ಘಟನೆಯಲ್ಲಿ ಗಾಯಗೊಂಡವರು ನೀಡಿದ ದೂರಿನ ಆಧಾರದ ಮೇಲೆ ಸುಬ್ರಹ್ಮಣ್ಯಪುರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರೇಮ್ ಅಲಿಯಾಸ್ ಚಿನ್ನು, ಮಣಿಕಂಠ, ಮನೋಜ್, ಕೃಷ್ಣಗುಪ್ತ ಅಲಿಯಾಸ್ ಕುಳ್ಳ, ಆಕಾಶ್ ಅಲಿಯಾಸ್ ಮಂಡ್ಯ, ಮುನ್ನಾ, ಮಧುಸೂದನ್ ಅಲಿಯಾಸ್ ಒಪ್ಪೋ ಮಧು, ದರ್ಶನ್, ಸುದೀಪ ಹಾಗೂ ಇತರರು ಎಂದು ಗುರುತಿಸಲಾಗಿದೆ.



ಆರೋಪಿಗಳಿಗೆ ಉಳಿದುಕೊಳ್ಳಲು ಶೆಲ್ಟರ್ ನೀಡಿದ್ದ ಆರೋಪದ ಮೇಲೆ ಓರ್ವ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಪ್ರೇಮ್ ಅಲಿಯಾಸ್ ಚಿನ್ನು ವಿರುದ್ಧ ಈ ಹಿಂದೆಯೇ ಹಲವು ಅಪರಾಧ ಪ್ರಕರಣಗಳಿವೆ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಆರೋಪಿಗಳು ಹುಡುಕುತ್ತಿದ್ದ ಸ್ಯಾಂಡಿ ಮೇಲೂ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಂಗ್ ಕಟ್ಟಿಕೊಂಡು ಗಲಾಟೆ ಹಾಗೂ ದಾಳಿ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪ್ರೇಮ್ ಅಲಿಯಾಸ್ ಚಿನ್ನು ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಸದ್ಯ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


ವರದಿ ನದೀಮ್ ಕೆ ಎಂ




 

Comments

Popular posts from this blog

ರಾಗಿಗುಡ್ಡದ ನ್ಯಾಯಬೆಲೆ ಅಂಗಡಿ ಮುಂದೆ ಸರ್ಕಾರಿ ಅಕ್ಕಿ ಖರೀದಿ? ಅಧಿಕಾರಿಗಳ ಪರಿಶೀಲನೆ ಅಗತ್ಯ

ಗಣಪತಿಗೆ ಹೂವಿನ ಹಾರ ಅರ್ಪಿಸಿ, ನೀರು ಮತ್ತು ಜ್ಯೂಸ್ ವಿತರಣೆ

ರಾಗಿಗುಡ್ಡದಲ್ಲಿ ಭಕ್ತಿಭಾವದ ಸಂದಲ್ ಶರೀಫ್: ಬರ್ಗಾಹ್-ಎ-ಹಜ್ರತ್ ಖ್ವಾಜಾ ಸಯ್ಯದ್ ಶಾಹ್ ಅಬ್ದುಲ್ ಖಾದರ್ ಮೊಹಮ್ಮದ್ ಮೊಹಮ್ಮದ್ ಉಲ್ ಅಲ್ ಹಾಶ್ಮಿ ವಲ್ ಹುಸೈನಿ ಲಿಂಗ್ ಬಂಧ್ ಜಗದ್ಗುರು (ರಹ್ಮತುಲ್ಲಾಹಿ ಅಲೈಹಿ) ಸಾಹೇಬ್, ಪೀರ್ ಖಲೀಫಾ-ಎ-ಅವ್ವಲ್ ಹಜ್ರತ್ ಪೀರ್ ಮೊಹಮ್ಮದ್ ಖಾಲಿಕ್ ಅಲಿ ಶಾಹ್ ಚಿಷ್ಟಿ ಉಲ್ ಕಾದ್ರಿ (ರಹ್ಮತುಲ್ಲಾಹಿ ಅಲೈಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ