ಕುಡಿದು ಆಟೋ ಚಾಲನೆ: ವಿಡಿಯೋ ಆಧರಿಸಿ ಚಾಲಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು!
ಶಿವಮೊಗ್ಗದಲ್ಲಿ ಅಡ್ಡಾದಿಡ್ಡಿ ಆಟೋ ಚಾಲನೆ: ಕಂಟ್ರೋಲ್ ರೂಂಗೆ ವಿಡಿಯೋ ಕಳಿಸಿದ ಜನ, ಬಳಿಕ ಚಾಲಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು!
ಶಿವಮೊಗ್ಗ: ಮದ್ಯ ಸೇವಿಸಿ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಅಡ್ಡಾದಿಡ್ಡಿ ಆಟೋ ಚಲಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಆಟೋ ಚಾಲಕನ ವಿರುದ್ಧ ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ರಾತ್ರಿ ಶಿವಮೊಗ್ಗ ನಗರದ ಆಯನೂರು ಗೇಟ್ ಸರ್ಕಲ್ ಬಳಿಯ ಸಾಗರ ರಸ್ತೆಯಲ್ಲಿ ಆಟೋವೊಂದು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದು ಇತರೆ ವಾಹನ ಸವಾರರ ಗಮನಕ್ಕೆ ಬಂದಿದೆ. ಆಟೋ ಚಾಲಕ ಅಪಾಯಕಾರಿಯಾಗಿ ವಾಹನ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ವಾಹನ ಸವಾರರು ಆಟೋದ ಚಾಲನೆಯನ್ನು ತಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.
ನಂತರ ಈ ವಿಡಿಯೋವನ್ನು ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂಗೆ ಕಳುಹಿಸಿ, ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಿದ್ದಾರೆ.
ವಿಡಿಯೋ ಆಧರಿಸಿ ಕಾರ್ಯಪ್ರವೃತ್ತರಾದ ಸಂಚಾರ ಠಾಣೆ ಪೊಲೀಸರು ಆಟೋ ಚಾಲಕನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಬಳಿಕ ಚಾಲಕನನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದ್ಯ ಸೇವಿಸಿ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿರುವ ಆರೋಪದ ಮೇಲೆ ಆಟೋ ಚಾಲಕನ ವಿರುದ್ಧ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ, ಆಟೋ ಚಾಲಕ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಿದ್ದ ವಿಡಿಯೋ ಹಾಗೂ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿಯನ್ನು ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳಲಾಗಿದೆ.
ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವುದು ಚಾಲಕನಿಗೆ ಮಾತ್ರವಲ್ಲದೆ, ಇತರೆ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ಅಪಾಯ ಉಂಟುಮಾಡಬಹುದು. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಮದ್ಯ ಸೇವಿಸಿ ವಾಹನ ಚಲಾಯಿಸದೆ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಜನರು ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋ ಪೊಲೀಸರ ಗಮನಕ್ಕೆ ತಂದುಕೊಟ್ಟಿದ್ದು, ಅದರ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿರುವುದು ಇದೀಗ ಗಮನ ಸೆಳೆದಿದೆ.
ವರದಿ ನದೀಮ್ ಕೆ.ಎಂ


Comments
Post a Comment