ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆ! ಭಕ್ತ ಜನಸಾಗರ – ವೈಭವದ ಆಚರಣೆ
ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರೆಗೆ ಭಕ್ತ ಜನಸಾಗರ: ಹರಕೆ, ಪ್ರಾರ್ಥನೆ, ಪೂಜೆಯೊಂದಿಗೆ ವೈಭವದ ಆಚರಣೆ
ಮುಂಜಾನೆ ಮುಗಿಲು ಕವಿಯುವ ಮುನ್ನವೇ ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತರು… ಕೈಯಲ್ಲಿ ಹಣ್ಣು-ಕಾಯಿ, ಮನದಲ್ಲಿ ನಂಬಿಕೆ… ತಮ್ಮ ಇಷ್ಟಾರ್ಥ ಈಡೇರಲಿ, ಬೆಳೆ ಸಮೃದ್ಧಿಯಾಗಲಿ, ಉತ್ತಮ ಮಳೆಯಾಗಲಿ ಎಂದು ದೇವಿಯ ಮೊರೆ ಹೋದ ಭಕ್ತ ಸಮೂಹ. ಹೀಗೆ ಭಕ್ತಿ ಮತ್ತು ನಂಬಿಕೆಯ ಸಂಗಮಕ್ಕೆ ಸಾಕ್ಷಿಯಾಯಿತು ರಿಪ್ಪನ್ಪೇಟೆ ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ.
ರಿಪ್ಪನ್ಪೇಟೆ: ಸಮೀಪದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಪಿತೃ ಪಕ್ಷದ ಸಂದರ್ಭದಲ್ಲಿ ನಡೆಯುವ ಈ ಜಾತ್ರೆಯ ಮೊದಲ ಮಂಗಳವಾರದಂದು ಮುಂಜಾನೆಯಿಂದಲೇ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹಣ್ಣು-ಕಾಯಿ ಸಮರ್ಪಿಸಿ ತಮ್ಮ ಭಕ್ತಿಯನ್ನು ಮೆರೆದರು.
ಜೇನುಕಲ್ಲಮ್ಮ ದೇವಿಯ ಜಾತ್ರೆಗೆ ಸರ್ವಜನಾಂಗದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳು ಈಡೇರಲೆಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮದುವೆ, ಸಂತಾನ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ದೊರೆಯಲೆಂದು ಹಲವರು ದೇವಿಯ ಸನ್ನಿಧಿಯಲ್ಲಿ ಹರಕೆ ಮಾಡಿಕೊಂಡರು.
ಇನ್ನು ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ರೋಗ-ರುಜಿನ ಬಾರದಂತೆ, ಉತ್ತಮ ಇಳುವರಿ ದೊರೆಯುವಂತೆ ಪ್ರಾರ್ಥಿಸಿ ಅಡಿಕೆ, ಶುಂಠಿ ಸೇರಿದಂತೆ ವಿವಿಧ ಬೆಳೆಗಳನ್ನು ದೇವಿಯ ಸನ್ನಿಧಿಗೆ ತಂದು ಸಮರ್ಪಿಸಿದರು.
ಮತ್ತೊಂದೆಡೆ ಉತ್ತಮ ಮಳೆಯಾಗಲಿ ಎಂಬ ಆಶಯದಿಂದಲೂ ಭಕ್ತರು ಜೇನುಕಲ್ಲಮ್ಮ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಲೆನಾಡಿಗರ ಆರಾಧ್ಯ ದೈವವಾಗಿರುವ ಜೇನುಕಲ್ಲಮ್ಮ ದೇವಿಯ ಪ್ರಥಮ ಮಂಗಳವಾರದ ಜಾತ್ರೆಗೆ ಭಕ್ತ ಜನಸಾಗರವೇ ಹರಿದುಬಂದಿದ್ದು, ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ನೆರವೇರಿತು.
ವರದಿ ನದೀಮ್ ಕೆ ಎಂ



ಸರ್ವ ಜನಾಂಗದ ಈ ರೀತಿಯ ಜಾತ್ರೆಗಳು ಇನ್ನು ಹೆಚ್ಚೆಚ್ಚು ಆಗಲಿ ಸರ್ವ ಜನಾಂಗದ ತೋಟವಿದು ಭಾರತ
ReplyDelete