ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ! | ನಿಖಿಲ್‌ಗೆ ಕರವೇ ಅಭಿನಂದನೆ

 ಶಿವಮೊಗ್ಗ: ಶಾಂತಿ ಸುವ್ಯವಸ್ಥೆ ಕಾಪಾಡಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರಿಗೆ ಕರವೇ ಸ್ವಾಭಿಮಾನಿ ಬಣದಿಂದ ಅಭಿನಂದನೆ



ಶಿವಮೊಗ್ಗ ನಗರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಕ್ರಮ ಕೈಗೊಂಡ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.


ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ, ಶಾಂತಿನಗರ–ರಾಗಿಗುಡ್ಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮಗಳು, ಹಿಂದೂ ಮಹಾಸಭಾ ಗಣೇಶೋತ್ಸವದ ಮೆರವಣಿಗೆ ಹಾಗೂ ವಿಸರ್ಜನೆ ಮತ್ತು ಓಂ ಗಣಪತಿ ವಿಸರ್ಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.


ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.


ಇದರ ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಂತಿ ಸಭೆಗಳನ್ನು ನಡೆಸಿ, ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಲಾಗಿತ್ತು.



ಇದರಿಂದಾಗಿ ನಗರದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೌಹಾರ್ದಯುತವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಸಾಧ್ಯವಾಯಿತು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ತಿಳಿಸಿದ್ದಾರೆ.


ಸಾರ್ವಜನಿಕರ ನೆಮ್ಮದಿ ಹಾಗೂ ನಗರದ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳನ್ನು ಮೆಚ್ಚಿ, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಅವರನ್ನು ಕರವೇ ಸ್ವಾಭಿಮಾನಿ ಬಣದ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್., ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಹಮದ್ ಶಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೆ.ಬಿ., ಜಿಲ್ಲಾ ಕಾರ್ಯದರ್ಶಿ ಕರವೇ ಸಾಧಿಕ್, ಗ್ರಾಮಾಂತರ ನಗರಾಧ್ಯಕ್ಷ ಪ್ರವೀಣ್ ಕುಮಾರ್, ಗ್ರಾಮಾಂತರ ಉಪಾಧ್ಯಕ್ಷ ಕೇಶವ ವಿ., ಜಿಲ್ಲಾ ಮುಖಂಡರಾದ ಗೀರೀಶ್, ಮಂಜುನಾಥ್ ಟಿ.ಎಂ. ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು


ವರದಿ ನದೀಮ್ ಕೆ ಎಂ 



Comments