ಪತ್ನಿ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

 ಪತ್ನಿ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ



ಶಿವಮೊಗ್ಗ: ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷದ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.


ಶಿವಮೊಗ್ಗ ನಗರದ ಟಿಪ್ಪುನಗರದ ನಿವಾಸಿ ಅಬ್ದುಲ್ ಶೊಯೆಬ್, 26 ವರ್ಷ, ಪತ್ನಿ ಕೌಸರ್ ಫಿಜಾ, 20 ವರ್ಷ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.


ಆರೋಪಿತ ಅಬ್ದುಲ್ ಶೊಯೆಬ್ ಮತ್ತು ಕೌಸರ್ ಫಿಜಾ ಪ್ರೀತಿಸಿ ವಿವಾಹವಾಗಿದ್ದು, ಇವರಿಗೆ ಒಂದೂವರೆ ವರ್ಷದ ಮಗುವಿತ್ತು. ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಆರೋಪಿತನಿಗೆ, ಕೌಸರ್ ಫಿಜಾ ಅವರು ತಮಗೆ ಇಷ್ಟವಿಲ್ಲದಿದ್ದರೆ ಬಿಟ್ಟುಬಿಡುವಂತೆ ಹೇಳಿದ್ದರು ಎನ್ನಲಾಗಿದೆ.


ಇದರಿಂದ ಪತ್ನಿಯ ಮೇಲೆ ಅನುಮಾನಗೊಂಡಿದ್ದ ಆರೋಪಿತನು, 2021ರ ಅಕ್ಟೋಬರ್ 16ರಂದು ಬೇರೆ ಬಾಡಿಗೆ ಮನೆ ನೋಡಿದ್ದೇನೆ, ಇಬ್ಬರೂ ಹೋಗಿ ನೋಡಿಕೊಂಡು ಬರೋಣ ಎಂದು ನಂಬಿಸಿ, ಕಾರಿನಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾನೆ.


ನಂತರ ಹಾಳೂರು–ಅನುಪಿನಕಟ್ಟೆ ರಸ್ತೆಯಲ್ಲಿರುವ ಹೊನ್ನಪ್ಪ ಲೇಔಟ್‌ಗೆ ಕರೆದೊಯ್ದು, ಸಂಜೆ 5:15ರಿಂದ 5:45ರ ನಡುವಿನ ಅವಧಿಯಲ್ಲಿ ಪತ್ನಿಯೊಂದಿಗೆ ಗಲಾಟೆ ಮಾಡಿ, ಚಾಕುವಿನಿಂದ ಚುಚ್ಚಿ, ಮಚ್ಚಿನಿಂದ ತಲೆಗೆ ಹೊಡೆದು ಹಾಗೂ ಕಲ್ಲಿನಿಂದ ಮುಖ ಮತ್ತು ದೇಹದ ಇತರೆ ಭಾಗಗಳಿಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.


ಈ ಕುರಿತು ಕೌಸರ್ ಫರ್ವಿಜ್ ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.341/2021, ಕಲಂ 498(ಎ), 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆಯನ್ನು ಆಗಿನ ತುಂಗಾನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಎಂ.ಎಸ್. ನಡೆಸಿ, ತನಿಖೆ ಪೂರ್ಣಗೊಳಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.


ಪ್ರಕರಣದ ವಿಚಾರಣೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಪಿ.ಓ. ಪುಷ್ಪಾ ವಾದ ಮಂಡಿಸಿದ್ದರು.


ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ. ಅವರು 2026ರ ಸೆಪ್ಟೆಂಬರ್ 23ರಂದು ತೀರ್ಪು ಪ್ರಕಟಿಸಿದ್ದಾರೆ.


ಕಲಂ 498(ಎ) ಮತ್ತು 302 ಐಪಿಸಿ ಅಡಿಯಲ್ಲಿ ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷದ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಲಾಗಿದೆ.


ಇದೇ ವೇಳೆ, ಮೃತರ ಕುಟುಂಬದವರಿಗೆ 2 ಲಕ್ಷದ 5 ಸಾವಿರ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.


ವರದಿ ನದೀಮ್ ಕೆ ಎಂ



Comments

Popular posts from this blog

ರಾಗಿಗುಡ್ಡದ ನ್ಯಾಯಬೆಲೆ ಅಂಗಡಿ ಮುಂದೆ ಸರ್ಕಾರಿ ಅಕ್ಕಿ ಖರೀದಿ? ಅಧಿಕಾರಿಗಳ ಪರಿಶೀಲನೆ ಅಗತ್ಯ

ಗಣಪತಿಗೆ ಹೂವಿನ ಹಾರ ಅರ್ಪಿಸಿ, ನೀರು ಮತ್ತು ಜ್ಯೂಸ್ ವಿತರಣೆ

ರಾಗಿಗುಡ್ಡದಲ್ಲಿ ಭಕ್ತಿಭಾವದ ಸಂದಲ್ ಶರೀಫ್: ಬರ್ಗಾಹ್-ಎ-ಹಜ್ರತ್ ಖ್ವಾಜಾ ಸಯ್ಯದ್ ಶಾಹ್ ಅಬ್ದುಲ್ ಖಾದರ್ ಮೊಹಮ್ಮದ್ ಮೊಹಮ್ಮದ್ ಉಲ್ ಅಲ್ ಹಾಶ್ಮಿ ವಲ್ ಹುಸೈನಿ ಲಿಂಗ್ ಬಂಧ್ ಜಗದ್ಗುರು (ರಹ್ಮತುಲ್ಲಾಹಿ ಅಲೈಹಿ) ಸಾಹೇಬ್, ಪೀರ್ ಖಲೀಫಾ-ಎ-ಅವ್ವಲ್ ಹಜ್ರತ್ ಪೀರ್ ಮೊಹಮ್ಮದ್ ಖಾಲಿಕ್ ಅಲಿ ಶಾಹ್ ಚಿಷ್ಟಿ ಉಲ್ ಕಾದ್ರಿ (ರಹ್ಮತುಲ್ಲಾಹಿ ಅಲೈಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ