ಶಿವಮೊಗ್ಗ–ಭದ್ರಾವತಿ ಅವಳಿ ನಗರಗಳ ಅಭಿವೃದ್ಧಿಗೆ ಭರ್ಜರಿ ಯೋಜನೆ

ಶಿವಮೊಗ್ಗ–ಭದ್ರಾವತಿ ಅವಳಿ ನಗರಗಳ ಅಭಿವೃದ್ಧಿಗೆ ಭರ್ಜರಿ ಯೋಜನೆ



ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಅವಳಿ ನಗರಗಳನ್ನು ಸ್ವಚ್ಛ, ಸುಂದರ ಹಾಗೂ ಅಭಿವೃದ್ಧಿ ಹೊಂದಿದ ನಗರಗಳನ್ನಾಗಿ ರೂಪಿಸಲು ಹಲವು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದ್ದಾರೆ.

ಕೆರೆಗಳು, ಉದ್ಯಾನವನಗಳು, ವರ್ತುಲ ರಸ್ತೆ, ಶುದ್ಧ ಕುಡಿಯುವ ನೀರು, ರಸ್ತೆ, ನಿಲ್ದಾಣಗಳು ಹಾಗೂ ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಶೇಷವಾಗಿ ಕ್ಷೇತ್ರ ವ್ಯಾಪ್ತಿಯ 15 ಕೆರೆಗಳ ಅಭಿವೃದ್ಧಿಗೆ 45 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಈಗಾಗಲೇ 5 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೆರೆಗಳ ಏರಿ ಅಭಿವೃದ್ಧಿ, ಪಾದಚಾರಿ ಮಾರ್ಗ, ರಕ್ಷಣಾ ಬೇಲಿ, ವಿದ್ಯುದ್ದೀಪಗಳ ಅಳವಡಿಕೆ ಹಾಗೂ ಕೆರೆಗಳ ಸುತ್ತಮುತ್ತ ಉದ್ಯಾನವನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗಾಗಿ ಉದ್ಯಾನವನಗಳಲ್ಲಿ ಕ್ರೀಡಾ ಪರಿಕರಗಳನ್ನು ಅಳವಡಿಸುವ ಯೋಜನೆಯೂ ಇದೆ.

ಇದರ ಜೊತೆಗೆ ಕೆರೆಯ ಮಧ್ಯಭಾಗದಲ್ಲಿ ನಡುಗಡ್ಡೆ ನಿರ್ಮಿಸಿ, ಅದನ್ನು ಸುಂದರವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಗಣೇಶೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗಣೇಶ ವಿಸರ್ಜನೆಗೆ ಅಗತ್ಯವಿರುವ ಕೆರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕೆರೆಗಳ ಸಮಗ್ರ ಸೌಂದರ್ಯೀಕರಣದ ಜೊತೆಗೆ ಪರಿಸರ ಹಸಿರಾಗಿಸಲು ಗಿಡಮರಗಳನ್ನು ನೆಡಲಾಗುತ್ತಿದೆ. ಹಣ್ಣಿನ ಗಿಡಗಳು ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸುವ ಯೋಜನೆಯೂ ಇದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನವನಗಳು, ಕೆರೆಗಳು ಹಾಗೂ ದೇವಸ್ಥಾನಗಳ ಸುತ್ತಮುತ್ತ ಕಲ್ಲುಬೆಂಚುಗಳು, ದೀಪದ ವ್ಯವಸ್ಥೆ ಹಾಗೂ ಅಗತ್ಯವಿರುವ ಕಡೆ ಕೊಳವೆಬಾವಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಗರದ ನಾಲ್ಕು ಭಾಗಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಿ, ಲಿಫ್ಟ್‌ಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ ಎಂದು ಹೆಚ್.ಎಸ್. ಸುಂದರೇಶ್ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ 30 ಉದ್ಯಾನವನಗಳು ಹಾಗೂ 10 ಆಟೋ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

ಇನ್ನು ನಗರದ ವಿವೇಕಾನಂದ ಬಡಾವಣೆಯಲ್ಲಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದಲ್ಲದೇ ಶಿವಮೊಗ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಯೋಜನೆ ರೂಪಿಸಲಾಗುತ್ತಿದೆ. ಜಿಲ್ಲೆಯ ಸಂತರು, ಶರಣರು ಹಾಗೂ ಪ್ರಸಿದ್ಧ ಸಾಹಿತಿಗಳು ಜನಿಸಿದ ಸ್ಥಳಗಳನ್ನು ಸರ್ಕಾರದ ಅನುದಾನ ಮತ್ತು ಅನುಮೋದನೆಯೊಂದಿಗೆ ಅಭಿವೃದ್ಧಿಪಡಿಸುವ ಉದ್ದೇಶವಿದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರ ನೆಲೆಯಾದ ಈಸೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಊರುಗಡೂರು, ವಾಜಪೇಯಿ ಬಡಾವಣೆ, ಕುವೆಂಪು ನಗರ, ಗೋಪಾಳ ಹಾಗೂ ವಿವೇಕಾನಂದ ಬಡಾವಣೆಗಳಲ್ಲಿ ಔಷಧೀಯ ಸಸ್ಯಗಳು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಿಸಲು ಯೋಜಿಸಲಾಗಿದೆ.

ಅದೇ ರೀತಿ ನಗರದ ಸುತ್ತಮುತ್ತ ಸುಮಾರು 34 ಕಿಲೋಮೀಟರ್ ಪ್ರದೇಶದಲ್ಲಿ 200 ಮೀಟರ್ ವಿಸ್ತೀರ್ಣದ ರಸ್ತೆ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ಹೆಚ್.ಎಸ್. ಸುಂದರೇಶ್ ತಿಳಿಸಿದ್ದಾರೆ.

ಒಟ್ಟಾರೆ, ಕೆರೆಗಳು, ಉದ್ಯಾನವನಗಳು, ರಸ್ತೆ, ಸಾರಿಗೆ, ಹಸಿರು ಪರಿಸರ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಶಿವಮೊಗ್ಗ–ಭದ್ರಾವತಿ ಅವಳಿ ನಗರಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.


ವರದಿ ನದೀಮ್ ಕೆ ಎಂ



Comments

Popular posts from this blog

ರಾಗಿಗುಡ್ಡದ ನ್ಯಾಯಬೆಲೆ ಅಂಗಡಿ ಮುಂದೆ ಸರ್ಕಾರಿ ಅಕ್ಕಿ ಖರೀದಿ? ಅಧಿಕಾರಿಗಳ ಪರಿಶೀಲನೆ ಅಗತ್ಯ

ಗಣಪತಿಗೆ ಹೂವಿನ ಹಾರ ಅರ್ಪಿಸಿ, ನೀರು ಮತ್ತು ಜ್ಯೂಸ್ ವಿತರಣೆ

ರಾಗಿಗುಡ್ಡದಲ್ಲಿ ಭಕ್ತಿಭಾವದ ಸಂದಲ್ ಶರೀಫ್: ಬರ್ಗಾಹ್-ಎ-ಹಜ್ರತ್ ಖ್ವಾಜಾ ಸಯ್ಯದ್ ಶಾಹ್ ಅಬ್ದುಲ್ ಖಾದರ್ ಮೊಹಮ್ಮದ್ ಮೊಹಮ್ಮದ್ ಉಲ್ ಅಲ್ ಹಾಶ್ಮಿ ವಲ್ ಹುಸೈನಿ ಲಿಂಗ್ ಬಂಧ್ ಜಗದ್ಗುರು (ರಹ್ಮತುಲ್ಲಾಹಿ ಅಲೈಹಿ) ಸಾಹೇಬ್, ಪೀರ್ ಖಲೀಫಾ-ಎ-ಅವ್ವಲ್ ಹಜ್ರತ್ ಪೀರ್ ಮೊಹಮ್ಮದ್ ಖಾಲಿಕ್ ಅಲಿ ಶಾಹ್ ಚಿಷ್ಟಿ ಉಲ್ ಕಾದ್ರಿ (ರಹ್ಮತುಲ್ಲಾಹಿ ಅಲೈಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ