ಶರಾವತಿ ಮುಳುಗಡೆ, ಅಡಿಕೆ ಬೆಳೆಗಾರರು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಆರಗ ಜ್ಞಾನೇಂದ್ರ ಮಾತು
ಅರಣ್ಯ ನೋಟಿಫಿಕೇಷನ್ನಿಂದ ಜನರಿಗೆ ತೊಂದರೆ: ಶಾಶ್ವತ ಪರಿಹಾರಕ್ಕೆ ಒತ್ತಾಯ
ಶರಾವತಿ ಮುಳುಗಡೆ, ಅಡಿಕೆ ಬೆಳೆಗಾರರು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಆರಗ ಜ್ಞಾನೇಂದ್ರ ಮಾತು
ಶಿವಮೊಗ್ಗ: ಅರಣ್ಯ ನೋಟಿಫಿಕೇಷನ್ನಿಂದ ಮಲೆನಾಡಿನ ಜನರಿಗೆ ಹಲವು ರೀತಿಯ ತೊಂದರೆ ಉಂಟಾಗುತ್ತಿದ್ದು, ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.
ಜನರ ನಡುವೆ ಮುಖ್ಯಮಂತ್ರಿ ಬಂದು ಅವರ ಆತಂಕವನ್ನು ದೂರ ಮಾಡುವ ಪ್ರಯತ್ನ ನಡೆಸಿರುವುದು ಸ್ವಾಗತಾರ್ಹ. ಅರಣ್ಯ ನೋಟಿಫಿಕೇಷನ್ನಿಂದ ಸಾಕಷ್ಟು ಬಾಧೆ ಉಂಟಾಗುತ್ತಿದ್ದು, ಈ ಕುರಿತು ಪ್ರಾಮಾಣಿಕವಾದ ಚರ್ಚೆ ನಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.
2009ರಿಂದಲೂ ಈ ವಿಚಾರ ಚರ್ಚೆಯಲ್ಲಿದ್ದು, ಕಸ್ತೂರಿರಂಗನ್ ಹಾಗೂ ಗಾಡ್ಗಿಲ್ ವರದಿಗಳು ಸಿದ್ಧವಾಗಿವೆ. ಈ ವಿಚಾರದಲ್ಲಿ ವಿದೇಶಿ ಕುಮ್ಮಕ್ಕು ಇದೆ ಎಂಬ ಅನುಮಾನಗಳಿದ್ದು, ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಶೇಷ ಅಧಿವೇಶನ ಕರೆದಿರುವುದರಿಂದ ಅಲ್ಲಿ ಈ ವಿಚಾರದ ಕುರಿತು ಸಾಕಷ್ಟು ಚರ್ಚೆ ನಡೆಸಲು ಅವಕಾಶವಿದೆ. ಜನರ ಆತಂಕ ಶಾಶ್ವತವಾಗಿ ದೂರವಾಗುವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಅಗತ್ಯವಿದ್ದರೆ ಒಂದು ವರ್ಷ ಕಾಲಾವಕಾಶ ಪಡೆದು ಸಂಪೂರ್ಣವಾಗಿ ಸರ್ವೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶರಾವತಿ ಮುಳುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಚರ್ಚಿಸಿ ಬರುವಂತೆ ಸೂಚಿಸಿರುವುದನ್ನು ಉಲ್ಲೇಖಿಸಿದ ಅವರು, ಈ ಸಮಸ್ಯೆ ಬಗೆಹರಿಸಲು ಇದು ಸೂಕ್ತ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಅಂತ್ಯಸಂಸ್ಕಾರಕ್ಕೂ ಜಾಗದ ಸಮಸ್ಯೆ
ಮಲೆನಾಡಿನ ಕೆಲವು ಭಾಗಗಳಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಲು ಸಹ ಜಾಗದ ಸಮಸ್ಯೆ ಎದುರಾಗಿದೆ. ಅಂತ್ಯಸಂಸ್ಕಾರಕ್ಕಾಗಿ ಅರಣ್ಯ ಪ್ರದೇಶಕ್ಕೆ ತೆರಳಬೇಕಾದ ಸಂದರ್ಭಗಳಲ್ಲಿ ಅರಣ್ಯ ಅಧಿಕಾರಿಗಳಿಂದಲೂ ಅಡ್ಡಿ ಉಂಟಾಗುತ್ತಿದೆ. ಈ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸಲು ಆಗ್ರಹ
ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆ ಬೆಳೆಗಾರರಿದ್ದು, ಅವರ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಗುಟ್ಕಾ ಮೇಲಿನ ನಿಷೇಧವನ್ನು ಹಿಂಪಡೆಯುವ ಕುರಿತು ಸರ್ಕಾರ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಈ ವಿಚಾರವನ್ನು ಗಮನಿಸಬೇಕು. ಅಡಿಕೆಗೆ ಸೂಕ್ತ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೇಶದಲ್ಲಿ ಬೆಳೆಯುವ ಅಡಿಕೆಯ ಬಹುಪಾಲು ಕರ್ನಾಟಕದಲ್ಲೇ ಬೆಳೆಯುತ್ತಿದ್ದು, ಅಡಿಕೆ ಬೆಳೆಗಾರರನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ತುಂಗಾ ನದಿಗೆ ಸೇರುತ್ತಿರುವ ಕೊಳಚೆ ನೀರಿಗೆ ಕಡಿವಾಣ
ತೀರ್ಥಹಳ್ಳಿಯ ಕೊಳಚೆ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿರುವ ಬಗ್ಗೆ ಕೂಡ ಆರಗ ಜ್ಞಾನೇಂದ್ರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಸೂಕ್ತ ನಿರ್ವಹಣೆ ಹಾಗೂ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವರದಿ ನದೀಮ್ ಕೆ ಎಂ



Comments
Post a Comment