ಶಿವಮೊಗ್ಗ ಅರಣ್ಯ ಸಮಸ್ಯೆಗೆ ಪರಿಹಾರಕ್ಕೆ ರಾಘವೇಂದ್ರ ಮನವಿ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜ್ವಲಂತ ಅರಣ್ಯ ಸಮಸ್ಯೆಗಳಿಗೆ ಪರಿಹಾರಕ್ಕೆ ಸಂಸದ ಬಿ.ವೈ. ರಾಘವೇಂದ್ರ ಮನವಿ
ಬೆಂಗಳೂರು, ಆ. 21: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಅರಣ್ಯ, ವನ್ಯಜೀವಿಧಾಮ ಹಾಗೂ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ವಿಸ್ತೃತ ಮನವಿ ಸಲ್ಲಿಸಿದರು.
ಈ ವೇಳೆ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರೊಂದಿಗೆ ಕೂಡ ಸಂಸದರು ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿ ಮರು ವಿಂಗಡಣೆ, ಶರಾವತಿ ಸಂತ್ರಸ್ತರ ಪುನರ್ವಸತಿ, ಕೊಡಚಾದ್ರಿ ಕೇಬಲ್ ಕಾರ್ ಯೋಜನೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಸಂಸದರು ಸಚಿವರ ಮುಂದಿಟ್ಟರು.
ಶೆಟ್ಟಿಹಳ್ಳಿ ವನ್ಯಜೀವಿಧಾಮದ 397.96 ಚದರ ಕಿ.ಮೀ. ವ್ಯಾಪ್ತಿಯ ಗಡಿ ಮರು ವಿಂಗಡಣೆಯ ಅಂತಿಮ ಅಧಿಸೂಚನೆ ಹೊರಡಿಸುವುದು ಹಾಗೂ ಬಫರ್ ಜೋನ್ ಗಡಿ ತಿದ್ದುಪಡಿಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಶಿಫಾರಸು ಕಳುಹಿಸುವಂತೆ ಮನವಿ ಮಾಡಿದರು.
ಅದೇ ರೀತಿ, ಶರಾವತಿ ಸಿಂಹ-ಬಾಲದ ಮಕಾಕ್ ಅಭಯಾರಣ್ಯದ ಗಡಿ ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಹಾಗೂ ದಶಕಗಳಿಂದ ಬಾಕಿ ಇರುವ ಶರಾವತಿ ಸಂತ್ರಸ್ತರ ಪುನರ್ವಸತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಪೂರ್ಣಗೊಳಿಸಿ ಪ್ರಸ್ತಾವನೆ ಸಲ್ಲಿಸಲು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿದರು.
ಮೈಸೂರು ಪೇಪರ್ ಮಿಲ್ಸ್ (MPM) ಅರಣ್ಯ ವ್ಯಾಪ್ತಿಯ ಮರ ತೆರವುಗೊಳಿಸುವ ನಿರ್ವಹಣಾ ಯೋಜನೆಗೆ ಆದ್ಯತೆಯ ಮೇರೆಗೆ ಅನುಮೋದನೆ ನೀಡುವಂತೆ ಕೂಡ ಸಂಸದರು ಮನವಿ ಸಲ್ಲಿಸಿದರು.
ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ 766C ಅಡಿಯಲ್ಲಿ ಹೊಸನಗರದ ಮಾವಿನಕೊಪ್ಪ ವೃತ್ತದಿಂದ ಅಡುಗೋಡಿವರೆಗಿನ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಯ ಎರಡನೇ ಹಂತದ ಅನುಮೋದನೆ ಪ್ರಸ್ತಾವನೆಯನ್ನು ತ್ವರಿತವಾಗಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವ ಪಡೆದಿರುವ ಕೊಡಚಾದ್ರಿ–ಕೊಲ್ಲೂರು ಕೇಬಲ್ ಕಾರ್ ಯೋಜನೆಗೆ ಪರಿಸರ ಮತ್ತು ವನ್ಯಜೀವಿ ಮಂಜೂರಾತಿಯ ಶಿಫಾರಸು ಪತ್ರ ಹಾಗೂ ಹಂತ-1ರ ಅನುಮೋದನೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.
ಸಂಸದ ಬಿ.ವೈ. ರಾಘವೇಂದ್ರ ಅವರ ಮನವಿಗಳನ್ನು ಆಲಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ರಸ್ತಾಪಿಸಲಾದ ಎಲ್ಲಾ ವಿಷಯಗಳನ್ನು ಸೂಕ್ತವಾಗಿ ಪರಿಶೀಲಿಸಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ವರದಿ ನದೀಮ್ ಕೆ ಎಂ



Comments
Post a Comment