ಬರದ ನಡುವೆ ಶಿವಮೊಗ್ಗಕ್ಕೆ ಬಿಗ್ ರಿಲೀಫ್! ರೈತರಿಗೆ ನೀರು, ಜನರಿಗೆ ಕುಡಿಯುವ ನೀರು, ಗ್ರಾಮೀಣರಿಗೆ ಉದ್ಯೋಗ

 

ಬರ ಪರಿಸ್ಥಿತಿ ನಿರ್ವಹಣೆಗೆ ಸಚಿವ ಮಧು ಬಂಗಾರಪ್ಪ ಮಹತ್ವದ ಸೂಚನೆ

ಗ್ರಾಮೀಣ ಭಾಗದ ಜನರಿಗೆ ವಿಬಿ-ಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಉದ್ಯೋಗ, ಕುಡಿಯುವ ನೀರು ಹಾಗೂ ರೈತರ ಹಿತರಕ್ಷಣೆಗೆ ಆದ್ಯತೆ

ಶಿವಮೊಗ್ಗ, ಆಗಸ್ಟ್ 8: ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ವಿಬಿ-ಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಉದ್ಯೋಗ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಶಿವಮೊಗ್ಗ ಜಿಲ್ಲಾಡಳಿತ ಕಚೇರಿಯಲ್ಲಿ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ತಾಲೂಕುಗಳ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಬರ ಪರಿಸ್ಥಿತಿಯಿಂದ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಯೋಜನೆಯ ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರಿಗೆ ವ್ಯಾಪಕ ಅರಿವು ಮೂಡಿಸಬೇಕು. ಗ್ರಾಮಸಭೆ, ಪಿಡಿಒಗಳ ಮೂಲಕ ಹಾಗೂ ಕರಪತ್ರಗಳ ಮೂಲಕ ಯೋಜನೆಯ ಮಾಹಿತಿ ಜನರಿಗೆ ತಲುಪಿಸುವಂತೆ ಸಚಿವರು ಸೂಚಿಸಿದರು.

ರಾಜ್ಯದ ಟಾಪ್ 5ರಲ್ಲಿ ಶಿವಮೊಗ್ಗ

ಜಿಲ್ಲಾ ಪಂಚಾಯತ್ ಸಿಇಒ ಎನ್. ಹೇಮಂತ್ ಮಾತನಾಡಿ, ಜಿಲ್ಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಜುಲೈ 1ರಿಂದ ಜಾರಿಯಲ್ಲಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಒಂದು ಪ್ರಮುಖ ಕಾಮಗಾರಿಯನ್ನು ಕಡ್ಡಾಯವಾಗಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿದ್ದು, ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲಾಗುತ್ತಿದೆ. ಯೋಜನೆಯ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ ಟಾಪ್ 5 ಸ್ಥಾನದಲ್ಲಿದೆ ಎಂದು ತಿಳಿಸಿದರು.

ಗುಡ್ಡ ಕುಸಿತ ತಡೆಗೆ 82 ಕಾಮಗಾರಿಗಳು

ಮಲೆನಾಡು ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಗುಡ್ಡ ಕುಸಿತ ತಡೆಯುವ ಉದ್ದೇಶದಿಂದ 82 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗಳನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ಹಾಗೂ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಕೆಲವು ಕಾಮಗಾರಿಗಳು ವಿಳಂಬವಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.

ತುಂಗಾ ಜಲಾಶಯ ಶೇ.100 ಭರ್ತಿ

ಪ್ರಸ್ತುತ ತುಂಗಾ ಜಲಾಶಯ ಶೇ.100ರಷ್ಟು ಭರ್ತಿಯಾಗಿದ್ದು, ಭದ್ರಾ ಜಲಾಶಯ ಶೇ.50ರಷ್ಟು ಭರ್ತಿಯಾಗಿದೆ. ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳಲ್ಲಿ ಶೇ.45ರಿಂದ 50ರಷ್ಟು ನೀರಿನ ಸಂಗ್ರಹವಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ 170 ಅಡಿಗೆ ತಲುಪಿದರೆ ಮಾತ್ರ ಒಂದು ಬೆಳೆಗೆ ನೀರು ಒದಗಿಸಲು ಸಾಧ್ಯವಾಗಲಿದೆ. ಈ ಬಾರಿ ಬೆಳೆಗಳಿಗೆ ನೀರು ನೀಡಲು ಸಾಧ್ಯವಾಗದಿರುವ ಬಗ್ಗೆ ರೈತರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ತುಂಗಾ ನದಿಯಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡುವ ಪ್ರಸ್ತಾವನೆ

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವಂತೆ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರನ್ನು ಲಿಫ್ಟ್ ಮಾಡಿ ಹರಿಸುವ ಪ್ರಸ್ತಾವನೆ ಕುರಿತು ಶಾಸಕ ಶಾರದಾ ಪೂರ್ಯಾನಾಯ್ಕ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಸಭೆಯಲ್ಲಿ ಚರ್ಚಿಸಿದರು.

ತುಂಗಾದಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡಿದರೆ ರೈತರಿಗೆ ಬೆಳೆ ಬೆಳೆಯಲು ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.


ಅಪ್ಪರ್ ತುಂಗಾದಿಂದ ಕೆರೆಗಳಿಗೆ ನೀರು

ಅಪ್ಪರ್ ತುಂಗಾ ಕಾಲುವೆ ಮೂಲಕ ಕಾಲುವೆ ಹಾಗೂ ಕೆರೆಗಳನ್ನು ತುಂಬಿಸಲು ನೀರು ಬಿಡಲಾಗಿದೆ. ತಾಲೂಕಿನಲ್ಲಿ ಎರಡು ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಹೊಸಹಳ್ಳಿ ವ್ಯಾಪ್ತಿಯ 23 ಕೆರೆಗಳು ಈಗಾಗಲೇ ಭರ್ತಿಯಾಗಿವೆ.

ಕಾಲುವೆಗಳಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುವಂತೆ ಸಚಿವರು ಸೂಚಿಸಿದರು. ಏತ ನೀರಾವರಿ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಪೈಪ್‌ಲೈನ್ ಯೋಜನೆಗೆ ಅಗತ್ಯವಾದ ನೀಲನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಏತ ನೀರಾವರಿ ಘಟಕಗಳ ದುರಸ್ತಿ ಮಾಡುವಂತೆ ಸೂಚನೆ

ಉಬ್ರಾಣಿ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಘಟಕಗಳಲ್ಲಿ ಡಿಸೆಂಬರ್‌ವರೆಗೆ ನೀರು ನೀಡಲು ಅವಕಾಶವಿದ್ದರೂ ವಿದ್ಯುತ್ ಹಾಗೂ ಮೋಟಾರ್ ಸಮಸ್ಯೆಯಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಸಭೆಯ ಗಮನಕ್ಕೆ ತಂದರು.

ರೈತರಿಗೆ ಯಾವುದೇ ತೊಂದರೆಯಾಗದಂತೆ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿ ನೀರು ಹರಿಸುವಂತೆ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅನಧಿಕೃತ ಪಂಪ್‌ಸೆಟ್ ತೆರವಿಗೆ ಆದೇಶ

ಮಳೆ ಕೊರತೆಯ ಹಿನ್ನೆಲೆಯಲ್ಲಿ ಕೆರೆಗಳಲ್ಲಿರುವ ನೀರನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ. ಭಾಗಶಃ ತುಂಬಿರುವ ಕೆರೆಗಳಿಂದ ಅನಧಿಕೃತವಾಗಿ ನೀರು ಎತ್ತುತ್ತಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವಂತೆ ಸಚಿವರು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರ ಹಾಗೂ ಪೊಲೀಸ್ ರಕ್ಷಣೆಯೊಂದಿಗೆ ಅನಧಿಕೃತ ಪಂಪ್‌ಸೆಟ್‌ಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲೆಯಲ್ಲಿ ಶೇ.32ರಷ್ಟು ಮಳೆ ಕೊರತೆ

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜೂನ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.32ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶೇ.58ರಷ್ಟು ಭತ್ತ ಬಿತ್ತನೆ ಗುರಿಯಿದ್ದು, ಇದುವರೆಗೆ ಶೇ.47ರಷ್ಟು ಬಿತ್ತನೆಯಾಗಿದೆ. ಮೆಕ್ಕೆಜೋಳ ಬಿತ್ತನೆ ಶೇ.40ರಷ್ಟಿದ್ದು, ಒಟ್ಟಾರೆ ಶೇ.69ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆಗಸ್ಟ್ ಅಂತ್ಯದವರೆಗೆ ನಾಟಿ ಮಾಡಲು ಅವಕಾಶವಿದೆ ಎಂದು ಹೇಳಿದರು.

ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. 'ಬಗರ್ ಹುಕುಂ' ಜಮೀನುಗಳಿಗೂ ರಸಗೊಬ್ಬರ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ 60 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಅಡಿಕೆ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್‌ಗೆ ಪ್ರಸ್ತಾವನೆ

ಮಳೆ ಹಾಗೂ ಬಿರುಗಾಳಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಮಾರ್ಗಸೂಚಿಯಂತೆ ಭಾಗಶಃ ಮತ್ತು ಪೂರ್ಣ ಪರಿಹಾರ ವಿತರಿಸಲಾಗಿದೆ.

ಗ್ರಾಮಾಂತರ ಪ್ರದೇಶದಲ್ಲಿ ಬಿರುಗಾಳಿಯಿಂದ ಅಡಿಕೆ ಬೆಳೆ ಹಾನಿಯಾಗಿರುವ ಕುರಿತು ಈ ಹಿಂದೆ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲಾಗಿತ್ತು. ಇದೀಗ ಶಾಸಕರೊಂದಿಗೆ ನೂತನ ಮುಖ್ಯಮಂತ್ರಿಗಳ ಬಳಿ ಅಡಿಕೆ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭೂಕುಸಿತ ಸಂತ್ರಸ್ತರಿಗೆ ತಲಾ ₹5 ಲಕ್ಷ ಪರಿಹಾರ

ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೃತಪಟ್ಟ ಕೊಪ್ಪಳ ಮೂಲದ ಒಂದೇ ಕುಟುಂಬದ ಮೂವರು ಹಾಗೂ ಹೊಸನಗರದಲ್ಲಿ ಮೃತಪಟ್ಟ ಒಬ್ಬರಿಗೆ ತಲಾ ₹5 ಲಕ್ಷ ಪರಿಹಾರದ ಚೆಕ್ ಈಗಾಗಲೇ ವಿತರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.


31 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಜಿಲ್ಲೆಯ 25 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 31 ಗ್ರಾಮಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಈ ಪ್ರದೇಶಗಳಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಆನವಟ್ಟಿ ಹಾಗೂ ಶಿರಾಳಕೊಪ್ಪದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹುಣಸೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ಶಾಸಕ ಶಾರದಾ ಪೂರ್ಯಾನಾಯ್ಕ್ ಸಚಿವರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಅವರು ಸ್ವತಃ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆ ಸಚಿವರು ಸೂಚಿಸಿದರು.

ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ವೇಗ

ಅಂತರ್ಜಲ ಮಟ್ಟವೂ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.

ಮೀನು ಸಾಕಾಣಿಕೆಗೆ ನೆರವು ನೀಡುವಂತೆ ಮನವಿ

ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಮೀನು ಸಾಕಾಣಿಕೆ ಕಷ್ಟಕರವಾಗಿದೆ. ಮೀನು ಸಾಕಾಣಿಕೆಯನ್ನು ಅವಲಂಬಿಸಿರುವವರ ಜೀವನವೂ ಸಂಕಷ್ಟದಲ್ಲಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ತಿಳಿಸಿದರು.

ಹಿಂದೆ ಸರ್ಕಾರವೇ ಮೀನು ಮರಿಗಳನ್ನು ಖರೀದಿಸುತ್ತಿತ್ತು. ಆದರೆ ಪ್ರಸ್ತುತ ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಟ್ಟಿಲ್ಲ. ಈ ಉದ್ದೇಶಕ್ಕಾಗಿ ಅನುದಾನ ಮೀಸಲಿಡುವಂತೆ ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಈ ವಿಷಯವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

20 ಹೊಸ ಮಳೆ ಮಾಪನ ಕೇಂದ್ರಗಳ ಸ್ಥಾಪನೆ

ಜಿಲ್ಲೆಯಲ್ಲಿ 20 ಹೊಸ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅವುಗಳನ್ನು ವೈಜ್ಞಾನಿಕ ಹಾಗೂ ಸಮರ್ಪಕ ರೀತಿಯಲ್ಲಿ ಸ್ಥಾಪಿಸಿ ನಿಖರವಾದ ಮಳೆ ಪ್ರಮಾಣದ ದತ್ತಾಂಶ ಪಡೆಯುವಂತೆ ಸಚಿವರು ಸೂಚಿಸಿದರು.

ಮಳೆ ಮಾಪನ ಕೇಂದ್ರಗಳನ್ನು ಸೂಕ್ತವಾಗಿ ಸ್ಥಾಪಿಸದಿದ್ದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ನಿರ್ವಹಣೆಯಲ್ಲಿ ಸಮಸ್ಯೆಯಾಗಲಿದೆ. ಇದರಿಂದ ರೈತರು ಬೆಳೆ ವಿಮೆ ಮಾಡಿಸಲು ಹಿಂದೇಟು ಹಾಕುವ ಸಾಧ್ಯತೆಯೂ ಇದೆ ಎಂದು ಸಚಿವರು ಎಚ್ಚರಿಸಿದರು.

ಅಂಗನವಾಡಿ ಕಟ್ಟಡಗಳ ಸುರಕ್ಷತೆಗೆ ಆದ್ಯತೆ

ಶಿಥಿಲಗೊಂಡ ಹಾಗೂ ಸುರಕ್ಷಿತವಲ್ಲದ ಅಂಗನವಾಡಿ ಕಟ್ಟಡಗಳಿಗೆ ಮಕ್ಕಳನ್ನು ಕಳುಹಿಸಬಾರದು. ಅಂತಹ ಕಟ್ಟಡಗಳನ್ನು ತಕ್ಷಣ ದುರಸ್ತಿ ಮಾಡಬೇಕು ಅಥವಾ ಅಗತ್ಯವಿದ್ದಲ್ಲಿ ಮರುನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯ 997 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಸರಬರಾಜು ಮಾಡಲಾಗಿದ್ದು, ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ನಗರ ವ್ಯಾಪ್ತಿಯ ಅಂಗನವಾಡಿಗಳಿಗೆ ಪಾತ್ರೆ, ಹೊದಿಕೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ₹25 ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಕೆಯಾಗಿದ್ದು, ಈ ಕುರಿತು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಬೆಳೆ ವಿಮೆ ಕಟ್ಟಲು ಆ.14ರವರೆಗೆ ಅವಕಾಶ

ರೈತರು ಬೆಳೆ ವಿಮೆ ಕಂತು ಪಾವತಿಸಲು ಆಗಸ್ಟ್ 14ರವರೆಗೆ ಅವಕಾಶವಿದೆ. ಸಹಕಾರ ಸಂಘಗಳು ಹಾಗೂ ಬ್ಯಾಂಕುಗಳು ರೈತರಿಂದ ಬೆಳೆ ವಿಮೆ ಕಂತು ಸ್ವೀಕರಿಸಲು ನಿರಾಕರಿಸಬಾರದು ಎಂದು ಸಚಿವರು ಸೂಚಿಸಿದರು.

ಈ ಕುರಿತು ಕೃಷಿ ಜಂಟಿ ನಿರ್ದೇಶಕರು ಬ್ಯಾಂಕುಗಳೊಂದಿಗೆ ಸಮನ್ವಯ ಸಾಧಿಸಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ನಗರಕ್ಕೆ ಹೊಸ ಶುದ್ಧೀಕರಣ ಘಟಕ

ಶಿವಮೊಗ್ಗ ನಗರದಲ್ಲಿ ಹೊಸ ಶುದ್ಧೀಕರಣ ಘಟಕ ಆರಂಭಿಸುವ ಯೋಜನೆ ಸಿದ್ಧವಾಗಿದ್ದು, ಗಾಜನೂರು ಬಳಿ ಜಾಗ ಗುರುತಿಸಲಾಗಿದೆ. ಬಜೆಟ್‌ನಲ್ಲಿ ಅಗತ್ಯ ಅನುದಾನ ನಿಗದಿಪಡಿಸಿ ಯೋಜನೆಗೆ ಮಂಜೂರಾತಿ ನೀಡಲು ಸಹಕರಿಸುವಂತೆ ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ ಮಾಡಿದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರ ಲಭ್ಯ

ಜಿಲ್ಲೆಯಲ್ಲಿ ಒಟ್ಟು 7,905.54 ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದ್ದು, ಇದುವರೆಗೆ 5,125.36 ಕ್ವಿಂಟಾಲ್ ಸರಬರಾಜಾಗಿದೆ. ಇದರಲ್ಲಿ 2,639.93 ಕ್ವಿಂಟಾಲ್ ವಿತರಿಸಲಾಗಿದ್ದು, 2,485.43 ಕ್ವಿಂಟಾಲ್ ದಾಸ್ತಾನು ಲಭ್ಯವಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ರಸಗೊಬ್ಬರದ ಒಟ್ಟು ಲಭ್ಯತೆಯ ಪೈಕಿ 57,701 ಮೆಟ್ರಿಕ್ ಟನ್ ಮಾರಾಟವಾಗಿದ್ದು, ಪ್ರಸ್ತುತ 34,898.8 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. ರಸಗೊಬ್ಬರದ ಕೊರತೆ ಉಂಟಾಗದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರೈತರು ಹಾಗೂ ಜನರ ಹಿತಕ್ಕೆ ಆದ್ಯತೆ

ಸಭೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ, ರೈತರ ಹಿತರಕ್ಷಣೆ, ಕುಡಿಯುವ ನೀರು, ಕೃಷಿ, ಬೆಳೆ ಹಾನಿ ಪರಿಹಾರ, ಮಳೆ ಹಾನಿ, ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳು ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಚೇತನ್, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಸಿಇಒ ಎನ್. ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಸಿಸಿಎಫ್ ಹನುಂತಪ್ಪ, ಡಿಸಿಎಫ್ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಎಸಿ, ತಹಶೀಲ್ದಾರರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.                                                                                                                                                                     


                                                                                                                                                                                                                                                                                                                                                                 ವರದಿ. ನದೀಮ್ ಕೆ ಮ್      

Comments