ನಕಲಿ ಬಂಗಾರದ ನಾಣ್ಯಗಳ ಹೆಸರಿನಲ್ಲಿ ₹9.60 ಲಕ್ಷ ವಂಚನೆ – ಆರೋಪಿ ಬಂಧನ, ₹7.10 ಲಕ್ಷ ನಗದು ವಶ
ಶಿವಮೊಗ್ಗ: ನಕಲಿ ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹9.60 ಲಕ್ಷ ನಗದು ಪಡೆದು ವಂಚನೆ ಎಸಗಿದ್ದ ಆರೋಪಿಯನ್ನು ಆನಂದಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, ವಿಜಯನಗರ ಜಿಲ್ಲೆಯ ನಿವಾಸಿ ಮಂಜುನಾಥ ವಿ. ಎಂಬಾತ ತನ್ನ ಬಳಿ ಬಂಗಾರದ ನಾಣ್ಯಗಳಿದ್ದು, ಅವುಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ 2026ರ ಜೂನ್ 4ರಂದು ಸಾಗರ ತಾಲ್ಲೂಕಿನ ಜೋಗಿನಗದ್ದೆ ಗ್ರಾಮಕ್ಕೆ ಜಗದೀಶ್ ಅವರನ್ನು ಕರೆಸಿಕೊಂಡಿದ್ದನು. ಬಳಿಕ ಅವರಿಂದ ₹9,60,000 ನಗದು ಪಡೆದು, ನಕಲಿ ಬಂಗಾರದ ಆಭರಣಗಳನ್ನು ನೀಡಿ ವಂಚನೆ ಮಾಡಿದ್ದ ಎಂದು ಆರೋಪಿಸಲಾಗಿದೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 97/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಹಾಗೂ 190 ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ವಿ.ಜಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಸಾಗರ ಉಪವಿಭಾಗದ ಎಎಸ್‌ಪಿ ಬೆನಕ ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲಾಯಿತು.
ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್.ಪಿ. ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, 2026ರ ಆಗಸ್ಟ್ 4ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ ಮಂಜುನಾಥ ವಿ. (30) ಎಂಬ ಆರೋಪಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ₹7,10,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಆನಂದಪುರ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.



Comments
Post a Comment