ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ವಂಚನೆ! ಆರೋಪಿಗೆ 5 ವರ್ಷ ಜೈಲು ಶಿಕ್ಷೆ
ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಿಗೆ ವಂಚನೆ – ಆರೋಪಿಗೆ 5 ವರ್ಷ ಜೈಲು ಶಿಕ್ಷೆ
ಶಿವಮೊಗ್ಗ, ಆಗಸ್ಟ್ 13: ಶಿವಮೊಗ್ಗ ನಗರದ ಎಎನ್‌ಕೆ ರಸ್ತೆಯ ಗೋವಿಂದಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಇಮೇಜ್ ಟೆಕ್ನಾಲಜೀಸ್ ಎಂಬ ಕಂಪ್ಯೂಟರ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಷ್ಣುಭಕ್ತ (39) ಎಂಬಾತ ನಕಲಿ ದಾಖಲೆಗಳು, ಸರ್ಕಾರಿ ಸ್ಟ್ಯಾಂಪ್‌ಗಳು ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಮೊಹರುಗಳನ್ನು ಅಕ್ರಮವಾಗಿ ಸೃಷ್ಟಿಸಿ, ಅವುಗಳನ್ನು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳಿಗೆ ಸಲ್ಲಿಸುವ ಮೂಲಕ ಸರ್ಕಾರ ಹಾಗೂ ಬ್ಯಾಂಕ್‌ಗಳಿಗೆ ವಂಚನೆ ಎಸಗಿದ್ದ ಪ್ರಕರಣದಲ್ಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಈ ಕುರಿತು ದಾಖಲಾಗಿದ್ದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 21/2021 ಅಡಿಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 255, 256, 258, 420, 465, 467 ಹಾಗೂ 468ರಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ಡಿವೈಎಸ್‌ಪಿ ಪ್ರಶಾಂತ್ ಮುನ್ನೊಳಿ ಅವರು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಡೆಸಿದ್ದು, ಮಾನ್ಯ ನ್ಯಾಯಾಧೀಶ ಶ್ರೀ ಯಶವಂತ ಕುಮಾರ್ ಅವರು 2026ರ ಆಗಸ್ಟ್ 12ರಂದು ತೀರ್ಪು ಪ್ರಕಟಿಸಿದ್ದಾರೆ.
ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹17,000 ದಂಡ ವಿಧಿಸಿ ಆದೇಶ ನೀಡಿದೆ.
ಈ ತೀರ್ಪು ನಕಲಿ ದಾಖಲೆಗಳ ಸೃಷ್ಟಿ ಹಾಗೂ ಸರ್ಕಾರಿ ದಾಖಲೆಗಳ ದುರುಪಯೋಗದಂತಹ ಅಪರಾಧಗಳಿಗೆ ಕಾನೂನು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.


👍
ReplyDelete